ಎಂ.ಎಸ್. ಪುಟ್ಟಣ್ಣ
೧೮೫೪-೧೯೩೦. ಹೊಸಗನ್ನಡ ಅರುಣೋದಯ ಕಾಲದ ಪ್ರಸಿದ್ಧ ಕಾದಂಬರಿಕಾರರು. ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಸೂರ್ಯನಾರಾಯಣಭಟ್ಟ, ಚನ್ನಪಟ್ಟಣದವರು. ಹುಟ್ಟಿದ ಹತ್ತು ದಿನಗಳಲ್ಲೇ ತಾಯಿಯನ್ನು ಕಳೆದುಕೊಂಡು ಅಜ್ಜಿಯ ಹಾರೈಕೆಯಲ್ಲಿ ಸೋದರಮಾವ ಪೇಟೆ ಅಣ್ಣಯ್ಯ ಶಾಸ್ತ್ರಿಗಳ ಆಶ್ರಯದಲ್ಲಿ ಮೈಸೂರಿನಲ್ಲಿ ಬೆಳೆದು, ಓದಿ ಮೈಸೂರಿನ ಪುಟ್ಟಣ್ಣನವರಾದರು. ಆಗಿನ ಮರಾಠಿ ಪಂಥರ ಮಠದಲ್ಲಿ ವಿದ್ಯಾಭ್ಯಾಸ ಪ್ರಾರಂಭವಾಯಿತು. ಮುಂದೆ, ಈಗ ಮಹಾರಾಜ ಕಾಲೇಜಾಗಿರುವ ಆಗಿನ ರಾಜಾ ಸ್ಕೂಲ್‍ನಲ್ಲಿ ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಬಿ.ಎ. ಪರೀಕ್ಷೆಯಲ್ಲಿ ಓದುತ್ತಿದ್ದಾಗ ಧಾತು ಈಶ್ವರ ಸಂವತ್ಸರದ ಭೀಕರ ಕ್ಷಾಮ ಉಂಟಾದುದರಿಂದ ವಿದ್ಯಾಭ್ಯಾಸವನ್ನು ಮಧ್ಯದಲ್ಲೇ ನಿಲ್ಲಿಸಬೇಕಾಗಿ ಬಂತು. 1878 ರಲ್ಲಿ ಕೋಲಾರದ ಪ್ರೌಢಶಾಲೆಯಲ್ಲಿ ಸಹಾಯಕ ಉಪಾಧ್ಯಾಯರಾಗಿ ನೇಮಕಗೊಂಡರು. ಒಂದೆರಡು ವರ್ಷಗಳಾದ ಮೇಲೆ ಅಲ್ಲಿಂದ ಮಹಾರಾಜ ಕಾಲೇಜಿಗೆ ವರ್ಗವಾಯಿತು. ಈ ಮಧ್ಯೆ, ಪ್ರಯತ್ನಪಟ್ಟು ಅವಕಾಶ ಮಾಡಿಕೊಂಡು ಮದರಾಸಿಗೆ ಹೋಗಿ ಅಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕೆಲವು ಕಾಲದ ಮೇಲೆ, ಮಹಾರಾಜ ಕಾಲೇಜಿನ ಆಗಿನ ಮುಖ್ಯಸ್ಥರಾದ ಎಚ್.ಜೆ. ಭಾಭಾ ಅವರೊಡನೆ ಭಿನ್ನಾಭಿಪ್ರಾಯಗಳುಂಟಾಗಿ ಉಪಾಧ್ಯಾಯ ವೃತ್ತಿಗೆ ರಾಜೀನಾಮೆ ಸಲ್ಲಿಸಿ ಮೈಸೂರು ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾದರು. 1897ರಲ್ಲಿ ಚಿತ್ರದುರ್ಗದ ಅಮಲ್ದಾರರಾಗಿ ನೇಮಕಗೊಂಡು ಅನಂತರ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗ ಮೊದಲಾದ ತಾಲ್ಲೂಕುಗಳಲ್ಲಿ ಕೆಲಸ ಮಾಡಿದರು. ಈ ಕಾಲದಲ್ಲಿ ನಿಸ್ಪøಹತೆ ಬೆಳಕಿಗೆ ಬಂತು. 1908 ರಲ್ಲಿ ನಿವೃತ್ತರಾದರು. ಅನಂತರ ಕೆಲವು ಕಾಲ ಇವರು ಲಾಯರಾಗಿ ಸೇವೆ ಸಲ್ಲಿಸಿದರು.

	ಚಾಮರಾಜ ಒಡೆಯರ ಕಾಲದಲ್ಲಿ ಕನ್ನಡ ಭಾಷೆಯ ಪುನರುಜ್ಜೀವನ ಕಾರ್ಯ ಭರದಿಂದ ಸಾಗಿತ್ತು. ದಿವಾನ್ ರಂಗಾಚಾರ್ಲು ಮತ್ತು ವಿದ್ಯಾಭ್ಯಾಸದ ಡೈರೆಕ್ಟರೈಸ್ ಅವರ ಉತ್ತೇಜನದಿಂದ ಪುಟ್ಟಣ್ಣನವರು ತಮ್ಮ ಉಪಾಧ್ಯಾಯ ವೃತ್ತಿಯಲ್ಲಿ ಬರವಣಿಗೆಯ ಕೆಲಸವನ್ನು ಪಠ್ಯಪುಸ್ತಕಗಳ ರಚನೆಯಿಂದ ಪ್ರಾರಂಭಿಸಿದರು. ತಮ್ಮ ಆಪ್ತ ಸ್ನೇಹಿತರಾದ ಎಂ.ಬಿ. ಶ್ರೀನಿವಾಸಯ್ಯಂಗಾರರೊಂದಿಗೆ ಸೇರಿ ಕೆಲವು ಕಾಲ ಸಾಹಿತ್ಯ ರಚನೆ ಮಾಡಿ ಅನಂತರ ಸ್ವತಂತ್ರವಾಗಿ ಕೆಲಸ ಮಾಡಿದರು.                                                                      
     ===ಸಾಹಿತ್ಯಕೃತಿಗಳು===

	ಪುಟ್ಟಣ್ಣನವರ ಸಾಹಿತ್ಯ ಕೃಷಿ ವಿವಿಧ ರೀತಿಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿದ್ದು ಗಮನಾರ್ಹ. ಇವರ ರಚನೆಗಳನ್ನು ಸ್ಥೂಲವಾಗಿ ಆರು ವಿಭಾಗಗಳನ್ನಾಗಿ ಮಾಡಬಹುದು. 1. ಕಥೆ ಕಾದಂಬರಿಗಳು : ಮಾಡಿದ್ದುಣ್ಣೋ ಮಹಾರಾಯ : ಮುಸುಗ ತೆಗೆಯೇ ಮಾಯಾಂಗನೆ ; ಅವರಿಲ್ಲದೂಟ ; ಪೇಟೆ ಮಾತೇನಜ್ಜಿ ; ನೀತಿ ಚಿಂತಾಮಣಿ ; ಸುಮತಿ ಮದನ ಕುಮಾರರ ಚರಿತ್ರೆ, 2. ಜೀವನ ಚರಿತ್ರೆಗಳು ; ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆ ; ಕಾಂಪೂಷಣ ಚರಿತ್ರೆ ; ಮಹಮದ್ ಗವಾನನ ಚರಿತ್ರೆ ಮತ್ತು ಸರ್ ಸಾಲಾರ್ ಜಂಗನ ಚರಿತ್ರೆ. 3. ಇತಿಹಾಸ ; ಹಿಂದೂ ಚರಿತ್ರ ದರ್ಪಣ (ಎರಡು ಭಾಗಗಳು) ಮತ್ತು ಹಿಂದೂ ಚರಿತ್ರ ಸಂಗ್ರಹ. 4. ಸಂಶೋಧನೆ ; ಪಾಳೇಗಾರರು ; ಚಿತ್ರದುರ್ಗದ ಪಾಳೇಗಾರರು ; ಗುಮ್ಮನಾಯಕನ ಪಾಳಯದ ಪಾಳೇಗಾರರು ; ಹಾಗಲವಾಡಿ ಪಾಳೆಯಗಾರರು ಮತ್ತು ಇಕ್ಕೇರಿ ಸಂಸ್ಥಾನದ ಚರಿತ್ರೆ. 5. ಅನುವಾದ : ಹೇಮಚಂದ್ರ ರಾಜವಿಲಾಸ (ಷೇಕ್ಸ್‍ಪಿಯರನ ಕಿಂಗ್ ಲಿಯರ್ ನಾಟಕದ ಅನುವಾದ, ನಾಟಕ ರೂಪ), ಜಯಸಿಂಹರಾಜ ಚರಿತ್ರೆ, (ಷೇಕ್ಸ್‍ಪಿಯರನ ಸಿಂಬಲೈನ್ ನಾಟಕದ ಅನುವಾದ), (ಕಥಾರೂಪ) ಮತ್ತು ಹೇಮಲತ (ಷೇಕ್ಸ್‍ಪಿಯರನ ಹ್ಯಾಮ್ಲೆಟ್ ನಾಟಕದ ಅನುವಾದ, ನಾಟಕ ರೂಪ ಅಪ್ರಕಟಿತ) 6. ಶೈಕ್ಷಣಿಕ : ಕನ್ನಡ ಒಂದನೆಯ ಪುಸ್ತಕವು ಮತ್ತು ಕನ್ನಡ ಲೇಖನ ಲಕ್ಷಣ.

	ಪುಟ್ಟಣ್ಣನವರು ಹಲವಾರು ಕನ್ನಡ ಮತ್ತು ಇಂಗ್ಲಿಷ್ ಲೇಖನಗಳನ್ನು ಬರೆದಿದ್ದಾರೆ. ಗುರು ಶಿಷ್ಯ ಸಂಬಂಧ, ಕಾಲ ನಿಯಮ ಮೊದಲಾದ ಕನ್ನಡ ಲೇಖನಗಳು ಎಳೆಯರ ಬಗೆಗೆ ಅವರಿಗಿದ್ದ ಕಳಕಳಿಯನ್ನು ವ್ಯಕ್ತಪಡಿಸುತ್ತವೆ. ಕನ್ನಡದ ಸ್ಥಿತಿಯನ್ನು ವಿವೇಚಿಸಿರುವ ಅವರ ಇಂಗ್ಲಿಷ್ ಲೇಖನ ಕನ್ನಡದ ಅಂದಿನ ಪರಿಸ್ಥಿತಿಯನ್ನು ಸಮರ್ಥ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಚಾರಿತ್ರಿಕ ಸಂಗತಿಗಳ ಬಗೆಗೆ ಅವರಿಗೆ ಬಹಳ ಒಲವು. ಕನ್ನಡ ನಾಡಿನ ವೀರರ ಬಗೆಗೆ ಅವರ ಅಭಿಮಾನ ಹೆಚ್ಚು. ಚಿತ್ರದುರ್ಗದ ತಿಮ್ಮಣ್ಣನಾಯಕ, ಕದರಪ್ಪ ನಾಯಕ, ಗುದಗತ್ತಿ, ಯುದ್ಧ ವೀರ ಹಿರಿಮದಕರಿ ನಾಯಕ, ಚಿತ್ರದುರ್ಗದ ಓಬವ್ವ, ದೊಡ್ಡವಸಂತ ನಾಯಕ ಮೊದಲಾದ ಅನೇಕ ವೀರರನ್ನು ಕುರಿತು ಹಲವು ಇಂಗ್ಲಿಷ್ ಲೇಖನಗಳನ್ನು ಪ್ರಕಟಿಸಿದ್ದಾರೆ. 
ಇವಲ್ಲದೆ ಹಿತ ಬೋಧಿನಿ ಎಂಬ ಮಾಸ ಪತ್ರಿಕೆಯನ್ನು ಇವರು ಕೆಲಕಾಲ ನಡೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆಗೆ ದುಡಿದ ಇವರು ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. 

ಪುಟ್ಟಣ್ಣನವರ ರಚನೆಗಳನ್ನು ಅವಲೋಕಿಸಿದಾಗ ಇವರು ಆಯಾ ರಚನೆಯಲ್ಲಿ ಏನಾದರೊಂದು ಸಾಧನೆಯನ್ನು ಮಾಡಿರುವುದು ವೇದ್ಯವಾಗುತ್ತದೆ. ಸಾಮಾಜಿಕವಾಗಲಿ, ಐತಿಹಾಸಿಕವಾಗಲಿ ಕನ್ನಡ ಕಾದಂಬರಿಗಳಿಗೆ ವಸ್ತು ನಮ್ಮಲ್ಲೇ ವಿಪುಲವಾಗಿದೆ ಎಂಬುದನ್ನು ಕಂಡುಕೊಂಡ ಮೊದಲಿಗರಲ್ಲಿ ಇವರೂ ಒಬ್ಬರು. ಕನ್ನಡ ಕಾದಂಬರಿಗಳ ಇತಿಹಾಸದಲ್ಲಿ ಪುಟ್ಟಣ್ಣವನರ ಕಾದಂಬರಿಗಳಿಗೆ ಮಹತ್ವದ ಸ್ಥಾನವಿದೆ. ಆಗ ಕಾದಂಬರಿ ಪ್ರಕಾರ ಕನ್ನಡಕ್ಕೆ ಹೊಸದಾಗಿದ್ದ ಕಾಲ. ಅಲ್ಲದೆ, ಆ ಪ್ರಕಾರ ಕನ್ನಡದ ಜಾಯಮಾನಕ್ಕೆ ಪೂರ್ಣ ಒಗ್ಗೀತೇ ಎಂಬ ಸಂಶಯವೂ ಬಗೆಹರಿದಿರಲಿಲ್ಲ. ಅಂಥ ಹೊತ್ತಿನಲ್ಲಿ ಪುಟ್ಟಣ್ಣನವರು ತಮ್ಮ ಕಾದಂಬರಿಗಳ ಮೂಲಕ ಕನ್ನಡ ಕಾದಂಬರಿಗಳಿಗೆ ಸುಭದ್ರವಾದ ಅಡಿಪಾಯವನ್ನು ಹಾಕಿದರು. ಜೀವನ ಚರಿತ್ರೆಗಳಲ್ಲಿ ಕೂಡ ಅವರದೊಂದು ಮರೆಯಲಾಗದ ಕೊಡುಗೆ. ಅವರ ಕುಣಿಗಲ ರಾಮಶಾಸ್ತ್ರಿಗಳ ಚರಿತ್ರೆ ಕನ್ನಡದಲ್ಲಿ ಸ್ಥಳೀಯರೊಬ್ಬರ ಜೀವನವನ್ನು ಕುರಿತು ರಚಿತವಾದ ಚರಿತ್ರೆಗಳಲ್ಲಿ ಮೊದಲನೆಯದು. ಪುಟ್ಟಣ್ಣನವರ ಇತಿಹಾಸ ಕೃತಿಗಳ ಅಧ್ಯಯನ ಇವರ ದೇಶಾಭಿಮಾನವನ್ನು, ಇಲ್ಲಿಯ ಸಂಸ್ಕøತಿಯ ಬಗೆಗೆ ಇವರಿಗಿರುವ ಪ್ರಕಾಂಡ ಪಾಂಡಿತ್ಯವನ್ನೂ ಬಿಂಬಿಸುತ್ತದೆ. ಇವರ ಸಂಶೋಧನೆಯ ಕೃತಿಗಳಲ್ಲಿ ಕಂಡು ಬರುವ ಸಾಮಗ್ರಿ ಸಂಗ್ರಹಣೆ ಬೆರಗುಗೊಳಿಸುವಂಥದು. ಅಲ್ಲಿನ ವೈಜ್ಞಾನಿಕ ವಿಚಾರಧಾರೆ ಅಚ್ಚರಿಗೊಳಿಸುವಂಥದು. ಇವರ ಅನುವಾದಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇವರಿಗಿರುವ ಹಿಡಿತ ಪಟ್ಟುಗಳನ್ನು ಸೂಚಿಸುತ್ತವೆ. ಸರಳ ರೀತಿಯಲ್ಲಿ ರಚಿತವಾದ ಇವರ ಶೈಕ್ಷಣಿಕ ಗ್ರಂಥಗಳು ಎಳೆಯರಿಗೆ ನಿರಾಯಾಸವಾಗಿ ವಿಷಯ ಪ್ರತಿಪಾದನೆ ಮಾಡುತ್ತವೆ.

	ಪುಟ್ಟಣ್ಣನವರ ಮಹತ್ವದ ಸಾಹಿತ್ಯಿಕ ರಚನೆ ಎಂದರೆ ಮಾಡಿದ್ದುಣ್ಣೋ ಮಹಾರಾಯ (1915). ಬಹಳ ಚಿಕ್ಕದಾದ ಮೂಲ ಕಥೆಗೆ ಸಹಾಯಕವಾಗುವ ಇನ್ನಿತರ ಉಪಕಥೆಗಳು ವೃತ್ತಾಂತಗಳು, ವರ್ಣನೆಗಳು ಮೊದಲಾದುವನ್ನು ರೋಚಕವಾಗಿ ಹೇಳುತ್ತ ಹೋಗುವ ಪುಟ್ಟಣ್ಣನವರ ನಿರೂಪಣ ಶೈಲಿಯಲ್ಲಿ ಕುತೂಹಲ ಕಡೆಯವರೆಗೆ ಇರುತ್ತದೆ. ಹೆಸರೇ ಹೇಳುವಂತೆ ಇದು ನೀತಿ ಪ್ರತಿಪಾದನೆಯನ್ನು ಅತಿ ಮುಖ್ಯವಾಗಿರಿಸಿಕೊಂಡಿರುವ ಕೃತಿ. ಸತ್ಯಕ್ಕೆ ಗೆಲುವು, ಅಸತ್ಯಕ್ಕೆ ಸೋಲು ಎಂಬುದು ಇಲ್ಲಿ ಸುವ್ಯಕ್ತ. ಆದರೆ, ಬರವಣಿಗೆ ಜಿಗುಟಿಲ್ಲವಾದುದರಿಂದಲೂ ಆಡು ನುಡಿಯ ಸೊಗಡು ತುಂಬಿರುವುದರಿಂದಲೂ ಇದಕ್ಕೆ ಸಾಹಿತ್ಯಕವಾದ ಮೌಲ್ಯವೂ ದೊರೆತಿದೆ. ಕನ್ನಡ ಜನಕ್ಕೆ ಅಪರಿಚಿತವಾದ ಯಾವುದೋ ಸಮಾಜ ಚಿತ್ರಣಗಳಿಂದ ತುಂಬಿದ ಕಾದಂಬರಿಗಳ ನಡುವೆ, ಕನ್ನಡ ಜನರ ಆಚಾರ ವಿಚಾರಗಳು, ಸ್ವಭಾವ ಮರ್ಯಾದೆಗಳು ಆಸೆ ಆಕಾಂಕ್ಷೆಗಳು ಮೊದಲಾದುವನ್ನು ಕನ್ನಡ ನುಡಿಗಟ್ಟಿನಿಂದ ಶ್ರೀಮಂತ ಶೈಲಿಯಲ್ಲಿ ಮಾಡಿದ್ದುಣ್ಣೋ ಮಹಾರಾಯ ಕಾದಂಬರಿಯಲ್ಲಿ ಪುಟ್ಟಣ್ಣನವರು ಚಿತ್ರಿಸಿದರು. ಇವರ ಈ ಕಾದಂಬರಿಯ ಗದ್ಯದಲ್ಲಿ ಕನ್ನಡದ ನಾಡಿಮಿಡಿತ ಸ್ಪಷ್ಟವಾಗಿ ಕೇಳಿ ಬರುತ್ತದೆ. 

	ಪುಟ್ಟಣ್ಣನವರು ಸಾಹಿತ್ಯಕ ಕೃಷಿಯನ್ನು ಆರಂಭಿಸಿದಾಗ ಹೊಸಗನ್ನಡದ ನೆಲ ಹದವಾಗಿರಲಿಲ್ಲ. ಪ್ರಾರಂಭದ ಕಾರ್ಯಕರ್ತರಿಗೆ ಎದುರಾಗುವ ತೊಡರುಗಳನ್ನೆಲ್ಲ ಇವರು ಸದ್ದಿಲ್ಲದೆ ಅನುಭವಿಸಬೇಕಾಯಿತು. ಆದರೂ ಇವರು ಕಂಗೆಡಲಿಲ್ಲ. ಜನಸಾಮಾನ್ಯರಿಗೆ ಸಮೀಪದವರಾಗಿದ್ದುಕೊಂಡು ಆತ್ಮೀಯವಾದ ಸಾಮಾಜಿಕ ಚಿತ್ರಣವನ್ನು ತಮ್ಮ ಕಾದಂಬರಿಗಳಲ್ಲಿ ತಂದರು. ಕನ್ನಡದ ಗದ್ಯವನ್ನು ಅದರ ಅಸಹಜ ಧೋರಣೆ ಸಂಪ್ರದಾಯಗಳಿಂದ ಬಿಡುಗಡೆ ಮಾಡಿದರು. ಅದರ ಬಿಗುವನ್ನು ಸಡಿಲಿಸಿ ಅದಕ್ಕೆ ಲಾಲಿತ್ವವನ್ನೂ ಬಳುಕನ್ನೂ ತಂದುಕೊಟ್ಟರು. ಅದಕ್ಕೆ ಆಡುನುಡಿಯ ಬನಿಯನ್ನು ತುಂಬಿದರು. ನೋವಿನಾಳವನ್ನು ಕಂಡವರು ಮಾತ್ರ ತರಬಹುದಾದ ತಿಳಿನಗೆಯನ್ನು ತಮ್ಮ ಕೃತಿಗಳಲ್ಲಿ ಹೊರಸೂಸಿದರು.

ಪುಟ್ಟಣ್ಣನವರು 1890-91, 1891-92 ಈ ಎರಡು ವರ್ಷಗಳಲ್ಲಿ ಮದರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪರೀಕ್ಷಕರಗಿದ್ದರು. ಮೈಸೂರಿನಲ್ಲಿ ಅಪ್ಪರ್ ಮತ್ತು ಲೋಯರ್ ಸೆಕೆಂಡರಿ ಪರೀಕ್ಷೆಗಳಿಗೆ ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಮತ್ತು ಚರಿತ್ರೆಯ ಪರೀಕ್ಷಕರಾಗಿದ್ದರು. ಮೈಸೂರಿನಲ್ಲಿ ಪಠ್ಯಪುಸ್ತಕಗಳ ಸಮಿತಿಗಾಗಿಯೂ ಇವರು ಸದಸ್ಯರಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಾಳೆಯಗಾರರ ವಿಚಾರವಾಗಿ ಐದು ಉಪನ್ಯಾಸಗಳನ್ನು ನೀಡಿದ್ದರು. ಕನ್ನಡ ಪದಗಳ ಅಕ್ಷರ ಸಂಯೋಜನೆಯ ಬಗೆಗೆ ಅನೇಕ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಕೃತಕವಾದ ಗ್ರಾಂಥಿಕ ರೂಪಗಳಲ್ಲಿ ಭಾಷೆ ಬದುಕುವುದಿಲ್ಲ. ಸಹಜವಾದ ಆಡುನುಡಿಯಲ್ಲಿ ಅದರ ಜೀವಂತಿಕೆ ಇದೇ ಎಂಬುದು ಇವರ ದೃಢವಾದ ಅಭಿಮತವಾಗಿತ್ತು.

ಪುಟ್ಟಣ್ಣನವರಿಗೆ ಸಾರ್ವಜನಿಕ ಮೇಲ್ಮೆಯ ವಿಚಾರಗಳಲ್ಲಿ ಬಹುವಾದ ಆಸಕ್ತಿ ಇತ್ತು. ಇವರು ಬೆಂಗಳೂರಿನ ತೆರಿಗೆದಾರರ ಸಂಸ್ಥೆಯಲ್ಲಿ ತಮ್ಮ ಅಸಾಧಾರಣ ಕಾರ್ಯ ನಿರ್ವಹಣತ್ವವನ್ನು ತೋರಿಸಿದರು. ಇವರ ಕಾಲದಲ್ಲಿ ಈ ಸಂಸ್ಥೆಯ ಕಾರ್ಯಕಲಾಪಗಳು, ಅವುಗಳ ವಿವರಣೆ, ಟಿಪ್ಪಣಿ, ವರದಿಗಳು ಎಲ್ಲವೂ ಕನ್ನಡದಲ್ಲಿಯೇ ನಡೆಯುವಂತೆ ಮಾಡಿದ್ದುದು ಒಂದು ಗಮನಾರ್ಹ ಅಂಶ. ಇತರ ಹಲವಾರು ಸಂಘ ಸಂಸ್ಥೆಗಳಿಗಾಗಿಯೂ ಇವರು ದುಡಿದರು.

ಪುಟ್ಟಣ್ಣನವರು ಉದಾರಿಗಳು, ಪ್ರಾಮಾಣಿಕರು, ತಮ್ಮ ಹುದ್ದೆಯಲ್ಲಿ ಅತ್ಯಂತ ನಿಷ್ಠೆಯಿಂದ ನಡೆದುಕೊಂಡಿದ್ದವರು. ಹಿರಿಯರಾಗಲಿ ಕಿರಿಯರಾಗಲಿ ಕನ್ನಡದ ಕೆಲಸ ಮಾಡುವವರೆಂದರೆ ಅವರಿಗೆ ಬಹುಪ್ರೇಮ. ಕನ್ನಡ ನಾಡುನುಡಿಗಳಿಗೆ ಶಕ್ತಿಮೀರಿ ಶ್ರಮಿಸಿದ ಪುಟ್ಟಣ್ಣನವರು ತಮ್ಮ ಎಪ್ಪತ್ತಾರನೆಯ ವಯಸ್ಸಿನಲ್ಲಿ ದಿವಂಗತರಾದರು.			(ಎಚ್.ಎಸ್.ಎಸ್.ಯು.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ